ಪಟಿಯಾಲ
ಭಾರತ ಗಣರಾಜ್ಯದ ಪಂಜಾಬ್ ರಾಜ್ಯದಲ್ಲಿರುವ ಒಂದು ನಗರ, ಪಟಿಯಾಲ ಜಿಲ್ಲೆಯ ಹಾಗೂ ವಿಭಾಗದ ಮುಖ್ಯ ಪಟ್ಟಣ.  ದೆಹಲಿಯ ಉತ್ತರ ವಾಯವ್ಯಕ್ಕೆ ಸುಮಾರು 203 ಕಿ.ಮೀ. ದೂರದಲ್ಲಿದೆ.  ಜನಸಂಖ್ಯೆ 1,51,903 (1971).

	ಪಟಿಯಾಲ ನಗರ ಹಿಂದೆ ಪಟಿಯಾಲ ಸಂಸ್ಥಾನದ ರಾಜಧಾನಿ ಆಗಿತ್ತು.  ಇದು ವ್ಯಾಪಾರ ಕೈಗಾರಿಕೆಗಳ ಕೇಂದ್ರ.  ನೆಯ್ಗೆ, ಹತ್ತಿ ಬಿಡಿಸುವುದು, ಮದ್ಯ ತಯಾರಿಕೆ ಮುಖ್ಯ ಕೈಗಾರಿಕೆಗಳು.  ನಗರದ ಮಧ್ಯದಲ್ಲಿ ಹಳೆ ಕೋಟೆಯಿದೆ.  1962 ರಲ್ಲಿ ಸ್ಥಾಪಿತವಾದ ಪಂಜಾಬ್ ವಿಶ್ವವಿದ್ಯಾಲಯವೂ ಅದಕ್ಕೆ ಸೇರಿದ 10 ಕಾಲೇಜುಗಳೂ ಇವೆ.

	ಪಟಿಯಾಲ ಜಿಲ್ಲೆಯ ವಿಸ್ತೀರ್ಣ 5,012 ಚ.ಕಿಮೀ.  ಜನಸಂಖ್ಯೆ 12,13,399 (1971).  ಜಿಲ್ಲೆಯ ಬಹುಭಾಗ ಬಂಜರು. ಮಳೆಗಾಲದಲ್ಲಿ ಹರಿಯುವ ತೊರೆಗಳಿಂದ ಬೇಸಾಯವಾಗುತ್ತದೆ.  1956ರಲ್ಲಿ ಪಂಜಾಬ್ ರಾಜ್ಯ ಪುನರ್ರಚಿತವಾದಾಗ ಪಟಿಯಾಲ ಜಿಲ್ಲೆಯನ್ನು ರಚಿಸಲಾಯಿತು.

	ಪಟಿಯಾಲ ವಿಭಾಗದಲ್ಲಿ ಭಾಟಿಂಡ, ರೂಪಾರ್, ಸಂಗ್ರೂರ್, ಪಟಿಯಾಲ ಎಂಬ ನಾಲ್ಕು ಜಿಲ್ಲೆಗಳಿವೆ.  ವಿಭಾಗದಲ್ಲಿ ದೊಡ್ಡ ನದಿಗಳಿಲ್ಲ.  ಮುಖ್ಯವಾದ್ದು ಘಗ್ಗರ್ ನದಿ.  ವಿಭಾಗದ ವಾರ್ಷಿಕ ಸರಾಸರಿ ಮಳೆ 1,020 ಮಿ.ಮೀ.  ಮಹೀಚಿದರ್‍ಘರ್ ಪ್ರದೇಶದಲ್ಲಿ ಕಾಡುಗಳಿವೆ.  ಅರಣ್ಯಗಳಲ್ಲಿ ಜಿಂಕೆ, ಕಿಸ್ತೂರಿಮೃಗ, ಚಿಗರಿ, ತೋಳ, ನರಿ, ಕಾಡುಬೆಕ್ಕು, ನೀರುನಾಯಿ, ಕಾಡುಹಂದಿ, ಕಾಡುಕೋಳಿ, ಹಸಿರುಪಾರಿವಾಳ, ಕೋಗಿಲೆ ಇವೆ.  ವಿಭಾಗದ ಮುಖ್ಯ ಬೆಳೆಗಳು ಗೋಧಿ, ಹತ್ತಿ, ಮುಸುಕಿನ ಜೋಳ ಮತ್ತು ದ್ವದಿಳಧಾನ್ಯ.  ಪ್ರಧಾನ ಕೈಗಾರಿಕೆಗಳು ಸೆಮೆಂಟ್, ವಿದ್ಯುತ್ ಸಲಕರಣೆ ಮತ್ತು ಜವಳಿ.  ವಿಭಾಗದ ಜನಸಂಖ್ಯೆ 42,10,989 (1971).

	ಪಟಿಯಾಲ ಸಂಸ್ಥಾನವನ್ನು 1762ರಲ್ಲಿ ಮಹಾರಾಜ ಆಲಾಸಿಂಗ್ ಸ್ಥಾಪಿಸಿದ.  ಭಾರತ ಸ್ವತಂತ್ರವಾದಾಗ (1947) ಪೂರ್ವ ಪಂಜಾಬಿನನಲ್ಲಿದ್ದ ಸಿಖ್ ಜನರ ಫೂಲಕಿ ಬಣದ ಮೂರು ಸಂಸ್ಥಾನಗಳು ಪಟಿಯಾಲ, ಜಿಂದ್ ಮತ್ತು ನಾಭ, ಪಟಿಯಾಲ ಮಹಾರಾಜರನ್ನು ಸಿಖ್ ಜನರು ತಮ್ಮ ಮುಖಂಡರೆಂದು ಭಾವಿಸಿದ್ದರು.  1804 ಮತ್ತು 1809 ರ ಒಪ್ಪಂದಗಳ ಪ್ರಕಾರ ಪಟಿಯಾಲ ಬ್ರಿಟಿಷರ ಆಶ್ರಿತ ಸಂಸ್ಥಾನವಾಯಿತು.  ಬ್ರಿಟಿಷರು ಸಿಕ್ಖರ ವಿರುದ್ಧ ಮಾಡಿದ ಯುದ್ಧಗಳಲ್ಲಿ ಹಾಗೂ 1857ರಲ್ಲಿ ನಡೆದ ಬಂಡಾಯದಲ್ಲಿ ಪಟಿಯಾಲ ಮಹಾರಾಜರು ಬ್ರಿಟಿಷರಿಗೆ ನೆರವು ನೀಡಿದ್ದರು.  ಭಾರತ ಸ್ವಾತಂತ್ರ್ಯ ಗಳಿಸಿದ ಮೇಲೆ ಪಟಿಯಾಲ ಮತ್ತು ಪೂರ್ವ ಪಂಜಾಬ್ ಸಂಸ್ಥಾನಗಳ ಒಕ್ಕೂಟ (ಪೆಪ್ಸು - ಪಟಿಯಾಲಾ ಅಂಡ್ ಈಸ್ಟ್ ಪಂಜಾಬ್ ಸ್ಟೇಟ್ಸ್ ಯೂನಿಯನ್)  ಸ್ಥಾಪಿತವಾಯಿತು.  ಈ ಸಂಸ್ಥಾನಗಳ ಪೈಕಿ ಅತ್ಯಂತ ದೊಡ್ಡದಾದ ಪಟಿಯಾಲದ ಮಹಾರಾಜರು ಪೆಪ್ಸುವಿನ ರಾಜಪ್ರಮುಖರಾದರು (1948).  ಒಕ್ಕೂಟದಲ್ಲಿ ಸಿಖ್ ಜನರು ಅಲ್ಪಸಂಖ್ಯಾತರಾಗಿದ್ದುದರಿಂದ ಅವರು ಈ ಒಕ್ಕೂಟ ತಮಗೆ ರಾಜಕೀಯವಾಗಿ ಹಾಗೂ ಆರ್ಥಿಕವಾಗಿ ಅನುಕೂಲವಾಗಿಲ್ಲ ಎಂದು ವಾದಿಸಿದ್ದರು.  ರಾಜ್ಯ ಪುನರ್‍ವಿಂಗಡಣೆಯ ಆಯೋಗದ ಶಿಫಾರಸಿನ ಪ್ರಕಾರ ಪೆಪ್ಸು ಒಕ್ಕೂಟ ಪಂಜಾಬ್ ರಾಜ್ಯದಲ್ಲಿ ವಿಲೀನಗೊಂಡಿತು.  ಮುಂದೆ ಪಂಜಾಬ್ ರಾಜ್ಯವನ್ನು ಮತ್ತೆ ಒಡೆದು ಪಂಜಾಬ್ ಮತ್ತು ಹರಿಯಾಣ ರಾಜ್ಯಗಳನ್ನು ರಚಿಸಲಾಯಿತು.  ಪಟಿಯಾಲ ಪಂಜಾಬಿನಲ್ಲಿ ಮುಂದುವರಿಯಿತು.
(ವಿ.ಜಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ